ಉತ್ತರ ಕರ್ನಾಟಕ ಭಾಗದಲ್ಲಿಯೇ ಉತ್ತಮ ರೇಷ್ಮೆ ಮಾರುಕಟ್ಟೆಯನ್ನು ಹೊಂದಿರುವ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲೀಗ ಚುನಾವಣೆಯ ಕಾವು ಏರುತ್ತಿದೆ. ಇದು 2008ರ ಕ್ಷೇತ್ರ ಮರುವಿಂಗಡಣೆಯ ನಂತರ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು, ಈ ಕ್ಷೇತ್ರದಲ್ಲಿಯೂ ಹಿಂದುಳಿದವರ್ಗ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದು, ಅಭ್ಯರ್ಥಿಗಳಿಗೆ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗುವ ಮೊದಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ.
1957ರಲ್ಲಿ ಲೀಲಾವತಿ ಮಾಗಡಿ 16,664 ಮತ ಪಡೆದು ಆಯ್ಕೆಯಾಗಿದ್ದರು. 1962ರಲ್ಲಿ ಕೆ.ಎಸ್. ವೀರಯ್ಯ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 17,347 ಮತ ಪಡೆದು ಆಯ್ಕೆಯಾಗಿದ್ದರು. 1967ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಸ್.ವಿ. ಕಾಶಿಮಠ 23,646 ಮತ ಪಡೆದು ಆಯ್ಕೆಯಾಗಿದ್ದರು. 1972ರಲ್ಲಿ ವಿ.ವಿ. ವಾಯಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 21,314 ಮತ ಪಡೆದು ಆಯ್ಕೆಯಾಗಿದ್ದರು.
1978ರಲ್ಲಿ ಉಪನಾಳ ಗೂಳಪ್ಪ ಕಾಂಗ್ರೆಸ್‌ನಿಂದ 28,606 ಮತ ಪಡೆದು ಗೆಲುವು ಸಾಧಿಸಿದ್ದರು. 1983ರಲ್ಲಿ ಮತ್ತೆ ಗೂಳಪ್ಪನವರು ಪಕ್ಷೇತರರಾಗಿ ಸ್ಪರ್ಧಿಸಿ 25,825 ಮತ ಪಡೆದು ಆಯ್ಕೆಯಾಗಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಬಿ. ಬಾಳಿಕಾಯಿ 24,362 ಮತ ಪಡೆದು ಆಯ್ಕೆಯಾಗಿದ್ದರು. 1989ರಲ್ಲಿ ಎಸ್.ಎನ್. ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 24,882 ಮತ ಪಡೆದು ಗೆಲುವು ಸಾಧಿಸಿದ್ದರು. 1994ರಲ್ಲಿ ಜನತಾದಳದ ಜಿ.ಎಂ. ಮಹಾಂತಶೆಟ್ಟರ್ 26,449 ಮತ ಪಡೆದು ಗೆಲವು ಹೊಂದಿದ್ದರು. 1999 ಹಾಗೂ 2004 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿ.ಎಸ್. ಗಡ್ಡದೇವರಮಠ ಆಯ್ಕೆಯಾಗಿದ್ದರು. 2008ರ ಚುನಾವಣೆಯಲ್ಲಿ ಕ್ಷೇತ್ರ ಮರುವಿಂಗಡಣೆಯಿಂದ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡು ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಮಣ್ಣ ಲಮಾಣಿ ಆಯ್ಕೆಯಾಗಿದ್ದರು.
2008ರಲ್ಲಿ ಬಿಜೆಪಿ ಗೆಲವು: 2008ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಬಿಜೆಪಿ ಪರವಾಗಿ ಬೀಸಿದ ಅಲೆ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಬಿಎಸ್‌ಆರ್ ಸಂಸ್ಥಾಪಕ ಶ್ರೀರಾಮುಲು ಅವರ ಪ್ರಭಾವದಿಂದ ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗ ಹಾಗೂ ಲಿಂಗಾಯತರ ಮತಗಳು ಒಟ್ಟಿಗೆ
ಸಮ್ಮಿಳಿತಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಸೋಲುವಂತಾಯಿತು. ಆದರೆ, ಈ ಬಾರಿ ಬಿಎಸ್‌ವೈ, ಶ್ರೀರಾಮುಲು ಬಿಜೆಪಿಯಲ್ಲಿ ಇಲ್ಲ. ಹಾಗಾಗಿ ಬಿಜೆಪಿ ಗೆಲುವು ಸುಲಭದ ಕೆಲಸವಲ್ಲ.
ಎಲ್ಲರ ಮೇಲೆ ಪ್ರೀತಿ: ಈ ಕ್ಷೇತ್ರದ ಜನತೆ ಎಲ್ಲರ ಮೇಲೆಯೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು, 2 ಬಾರಿ ಜನತಾ ಪರಿವಾರ, 3 ಬಾರಿ ಪಕ್ಷೇತರರು, 6 ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ.
ಈ ಬಾರಿ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆಯಾದರೂ ಪ್ರಾದೇಶಿಕ ಪಕ್ಷಗಳು ಪ್ರಬಲ ಪೈಪೋಟಿ ನೀಡುವ ಹಿನ್ನೆಲೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದರೂ ಆಶ್ಚರ್ಯ ಪಡಬೇಕಿಲ್ಲ.
ಅಂತೂ ಇಂತೂ ಈ ಬಾರಿ ಮತ್ತೊಮ್ಮೆ ಶಿರಹಟ್ಟಿ ಕ್ಷೇತ್ರ ಇತಿಹಾಸ ನಿರ್ಮಿಸಲಿದೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರ ಪಕ್ಷಗಳಿಗೆ ಬುದ್ದಿ ಕಲಿಸಲಿದೆ ಎಂದು ಇತಿಹಾಸವನ್ನು ನೋಡುವಾಗ ಅನ್ನಿಸುತ್ತದೆ ಆದರೆ ಇಲ್ಲಿನ ಜನರು ಪಕ್ಷಗಳ ಅಸ್ವಾಸನೆಗೆ ಮರುಳಾಗಬಾರದಷ್ಟೇ.
ಒಂದು ವೇಳೆ ಆಸೆ ಆಮಿಷಗಳಿಗೆ ಮರುಳಾದರೆ…ಶಿರಹಟ್ಟಿ ರಾಜಕೀಯ ಇತಿಹಾಸ ಹಳೆಯ ಇತಿಹಾಸವಾಗಷ್ಟೇ ಉಳಿಯಲಿದೆ
ಕಾದು ನೋಡುವುದೊಂದೇ ಉಳಿದಿರುವ ಮಾರ್ಗ

ಸಮಸ್ಯೆ-ಸಂಕಷ್ಟದ ಕ್ಷೇತ್ರ!
ಶಿರಹಟ್ಟಿ-ಲಕ್ಷ್ಮೇಶ್ವರ ಮತ್ತು ಮುಂಡರಗಿ ಅಕ್ಷರಶಃ ಹಿಂದುಳಿದ ತಾಲೂಕುಗಳು; ಕೃಷಿ ಕಾಯಕದ ಈ ಮೂರೂ ತಾಲೂಕುಗಳಲ್ಲಿ ರೈತಾಪಿ ವರ್ಗದ ಘೋರ ಬವಣೆ-ಬಡತನ ಒಂದೆಡೆಯಾದರೆ, ಮತ್ತೊಂದೆಡೆ ಕನಿಷ್ಠ ಮೂಲಸೌಕರ್ಯಗಳಿಗಾಗಿ ಪರದಾಡಬೇಕಾದ ಸಮಸ್ಯೆ-ಸಂಕಟಗಳಿವೆ! ನಂಜುಂಡಪ್ಪ ವರದಿಯಲ್ಲಿ ಶಿರಹಟ್ಟಿ ತೀರಾ ಹಿಂದುಳಿದ ತಾಲೂಕೆಂದು ನಮೂದಾಗಿದೆ; ಲಕ್ಷ್ಮೇಶ್ವರ ಹೆಸರಿಗಷ್ಟೆ ತಾಲೂಕು. ಸ್ವತಂತ್ರ ತಾಲೂಕೆಂದು ಘೋಷಣೆಯಾಗಿ ಐದು ವರ್ಷ ಕಳೆದರೂ ಲಕ್ಷ್ಮೇಶ್ವರದ ದೆಸೆ ಬದಲಾಗಿಲ್ಲ; ತಾಲೂಕಾ ಮಟ್ಟದ ಕಚೇರಿಗಳು, ಸೌಲಭ್ಯ ಜನರಿಗೆ ಸಿಗುತ್ತಿಲ್ಲ. ಮುಂಡರಗಿ ತಾಲೂಕಿನಲ್ಲಿ ಪ್ರಗತಿಯ ಯಾವ ಚಹರೆಯೂ ಕಾಣಿಸದು. ಕುಡಿಯುವ ನೀರು, ರಸ್ತೆ, ಶಿಕ್ಷಣ, ಆರೋಗ್ಯ, ಸಾರಿಗೆ, ನೈರ್ಮಲ್ಯದಂಥ
ಅನಿವಾರ್ಯ ಅವಶ್ಯಕತೆಗಳಿಗೆ ಮೂರೂ ತಾಲೂಕಿನ ಮಂದಿ ಗೋಳಾಡುವುದು ಹೇಳತೀರದು.
ಈ ತ್ರಿವಳಿ ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕ ಸಮಸ್ಯೆ ಭೀಭತ್ಸವಾಗಿದೆ. 15-20 ದಿನಕ್ಕೊಮ್ಮೆ ನೀರು ಬರುತ್ತದೆ. ಲಕ್ಷ್ಮೇಶ್ವರಕ್ಕೆ ನೀರು ಸರಬರಾಜಾಗುವ ಪೈಪ್‌ಗಳು ಲಡ್ಡಾಗಿ
ನೀರು ಸೋರಿಕೆ ಆಗುತ್ತಿದೆ. ನೀರಿನ ಕೊಳವೆಗಳು ಮುರಿದುಬಿದ್ದಿದ್ದು ಶಾಶ್ವತವಾಗಿ ನೀರು ಪೂರೈಕೆ ಸದ್ಯವೆ ಬಂದ್ ಆದರೂ ಆಶ್ವರ್ಯವಿಲ್ಲವೆಂದು ಆತಂಕಿತ ಜನರು ಉದ್ಗರಿಸುತ್ತಾರೆ. ಶಿರಹಟ್ಟಿ ಹಾಗು ಲಕ್ಷ್ಮೇಶ್ವರಕ್ಕೆ ಹೋಲಿಸಿದರೆ ಸಿಂಗಟಾಲೂರು ತುಂಗಭದ್ರಾ ಡ್ಯಾಮ್‌ನಿಂದ ಹತ್ತಿರದಲ್ಲಿರುವ ಮುಂಡರಗಿಯ ನೀರು-ನೀರಾವರಿ ಒಂಚೂರು ಪರವಾಗಿಲ್ಲ ಅನಿಸಿದರೂ ಉಳಿದ ಕಷ್ಟ-ಕಾರ್ಪಣ್ಯಗಳಲ್ಲಿ ವ್ಯತ್ಯಾಸವೇನಿಲ್ಲ!
ಇಡೀ ಅಸೆಂಬ್ಲಿ ಕ್ಷೇತ್ರದ ರಸ್ತೆಗಳು ಚಿಂದಿಚಿಂದಿಯಾಗಿದೆ; ಹಗಲಿರುಳೂ ಮರಳು ಮತ್ತು ಜಲ್ಲಿಕಲ್ಲಿನ ಮಾಫಿಯಾದ ಸಾವಿರಾರು ಓವರ್‌ಲೋಡ್ ಗಾಡಿಗಳು ರಾಜಾರೋಷವಾಗಿ ಓಡಾಡುವುದರಿಂದ ರಸ್ತೆಗಳು ಹಾಳಾಗುತ್ತಿವೆ. ದುರವಸ್ಥೆಯ ರಸ್ತೆಯಲ್ಲಿ ಬಸ್ ಓಡಿಸಲು ಕೆಎಸ್‌ಆರ್‌ಟಿಸಿ ಒಲ್ಲೆಯೆನ್ನುತ್ತಿದೆ. ಲಕ್ಷ್ಮೇಶ್ವರ ಬಸ್ ಡೀಪೋದಲ್ಲಿರುವುದು ಡಕೋಟಾ ಬಸ್‌ಗಳು. ಶೈಕ್ಷಣಿಕ ಸೌಲಭ್ಯಗಳಿಲ್ಲದ ಕ್ಷೇತ್ರದಲ್ಲಿ ಇರುವ ಶಾಲೆ-ಕಾಲೇಜಿಗೆ ಹೋಗಿಬರಲಿಕ್ಕೂ ಬಸ್ ವ್ಯವಸ್ಥೆಯಿಲ್ಲದಾಗಿದೆ; ಸಾರಿಗೆ ಸಮಸ್ಯೆಯಿಂದ ಕ್ಷೇತ್ರದ ಆರ್ಥಿಕತೆಯ ಮೇಲೆ ದುಷ್ಪರಿಣಾಮವಾಗುತ್ತಿದೆ. ಸಾಮಾನ್ಯ ಬಜೆಟ್ ಕಾಮಗಾರಿಗಳು 40 ಪರ್ಸೆಂಟ್ ಕಮಿಷನ್ ಹೊಡೆತಕ್ಕೆ ಕಳಪೆಯಾಗಿವೆ; ಶಾಸಕರು
ಕಂಟ್ರಾಕ್ಟರ್‍ಸ್ ಲಾಬಿಯನ್ನು ಪೋಷಿಸುತ್ತಿರುವುದರಿಂದ ಕಾಮಗಾರಿಯಲ್ಲಿ ಗುಣಮಟ್ಟವಿಲ್ಲದೆ ಆಧ್ವಾನವಾಗುತ್ತಿದೆ ಎಂಬ ಆಕ್ರೋಶದ ಅಭಿಪ್ರಾಯ ಸಾಮಾನ್ಯವಾಗಿದೆ.
ಕೈಗಾ-ಇಳಕಲ್ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕಳೆದ ಇಪ್ಪತ್ತು ವರ್ಷದಿಂದ ಹೋರಾಟ ಆಗುತ್ತಿದೆ. ಇಲೆಕ್ಷನ್ ಸಂದರ್ಭದಲ್ಲಷ್ಟೆ ಕ್ಷೇತ್ರಕ್ಕೆ ಬರುವ ಸಂಸದ ಶಿವಕುಮಾರ್ ಉದಾಸಿ ಸಮಸ್ಯೆಗಳ ಬಗ್ಗೆ ಉದಾಸೀನದಿಂದಿದ್ದಾರೆ; ಸ್ಥಳೀಯ ಶಾಸಕರಿಗೆ ಎಂಪಿಯಿಂದ ಕೆಲಸ ಮಾಡಿಸಿಕೊಳ್ಳುವ ತಾಕತ್ತಿಲ್ಲ. ಗದಗ-ಎಲುಗಿ ರೈಲು ಲಕ್ಷ್ಮೇಶ್ವರದ ಮಂದಿಗೆ ಮರೀಚಿಕೆಯಾಗಿದೆ. ಅಧಿಕಾರಸ್ಥರ ಮತ್ತವರ ಹಿಂಬಾಲಕರ ಶಿಲೆ ಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್ ಮತ್ತು ಮರಳುಗಾರಿಕೆಯ ಹಾವಳಿಗೆ ಶಿರಹಟ್ಟಿ-ಮುಂಡರಗಿ-ಲಕ್ಷ್ಮೇಶ್ವರ ಏರಿಯಾದ ಜನರ ಜೀವನ ದಿಕ್ಕೆಟ್ಟುಹೋಗಿದೆ. ಶಿರಹಟ್ಟಿ ಮತ್ತು ಮುಂಡರಗಿಯ ಹೊಳೆ ಮತ್ತು ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಯನ್ನು ಅಧಿಕಾರಸ್ಥರ ಹಿಂಬಾಲಕರು ನಿರಂತರ-ನಿರಾತಂಕವಾಗಿ ನಡೆಸಿದ್ದಾರೆ; ಕಲ್ಲು ಗಣಿಯ ಸ್ಫೋಟಕ್ಕೆ ಅಸಹಾಯಕರ ಮನೆಗಳು ಬಿರುಕುಬಿಡುತ್ತಿವೆ; ಜಲ್ಲಿ ಕ್ರಷರ್‌ನ ಕರ್ಕಶ ಸದ್ದು ಮತ್ತು ಧೂಳಿನ ಮಾಲಿನ್ಯದಿಂದ ಜನಸಾಮಾನ್ಯರ ಆರೋಗ್ಯ ಕೆಡುತ್ತಿದೆ.
ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರ ಯಾವತ್ತೂ ಯಾವ ಪಕ್ಷಕ್ಕೂ ಮೊರೆ ಹೋಗಲಿಲ್ಲ ಇದು ಯಾವತ್ತೂ ಭಿನ್ನ ಮತ್ತು ಭಂದಾಯದ ಸಂಕೇತವನ್ನು ಸೂಚಿಸಿದೆ, ಶಿರಹಟ್ಟಿ ಕ್ಷೇತ್ರದ ಜನ ತಮ್ಮ ಕ್ಷೇತ್ರದಲ್ಲಿ ಎಲ್ಲರ ಮೇಲೆ ಪ್ರೀತಿ ತೋರಿಸಿದ್ದಾರೆ ಈ ಕ್ಷೇತ್ರದ ಜನತೆ ಎಲ್ಲರ ಮೇಲೆಯೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು, 2 ಬಾರಿ ಜನತಾ ಪರಿವಾರ, 3 ಬಾರಿ ಪಕ್ಷೇತರರು, 6 ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ.
